ರಾಬರ್ಟ್‍ಸನ್ ಪೇಟೆ - 
ಭಾರತದ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಕಸಬೆಯ ಆಗ್ನೇಯಕ್ಕೆ 15 ಕಿಮೀ ದೂರದಲ್ಲಿ ಇರುವ ಪಟ್ಟಣ.  ಕೋಲಾರದ ಚಿನ್ನದ ಗಣಿ ಪ್ರದೇಶಕ್ಕೆ ಸಮೀಪದಲ್ಲಿ ಅದರ ಈಶಾನ್ಯ ಭಾಗದಲ್ಲಿದೆ.  ಇದು ಸುಮಾರು ಎಪ್ಪತ್ತು ವರ್ಷಗಳ ಕಾಲ ಕೆ. ಜಿ. ಎಫ್.  ನೈರ್ಮಲ್ಯ ಮಂಡಲಿಯ ಪುರಸಭಾ ಆಡಳಿತಕ್ಕೆ ಸೇರಿತ್ತು.  ಪಟ್ಟಣ ಬೆಳೆದು ವಿಸ್ತರಿಸಿದ ಪ್ರಯುಕ್ತ 1964 ನವೆಂಬರ್ 1 ರಂದು ನೈರ್ಮಲ್ಯ ಮಂಡಳಿಯಿಂದ ಪ್ರತ್ಯೇಕಿಸಿ ಪೌರಸಭಾ ಆಡಳಿತಕ್ಕೆ ಒಳಪಡಿಸಲಾಗಿದೆ.

ಜಾನ್ ಟೇಲರ್ ಅಂಡ್ ಕಂಪನಿ 1885 ರಲ್ಲಿ ಚಿನ್ನಕ್ಕಾಗಿ ಗಣಿಗಳನ್ನು ಅಗೆದಾಗ ಮೊದಲ ಸುರಂಗವನ್ನು ಉರಿಗಾಂ ಗ್ರಾಮದಲ್ಲಿ ಸಮೀಪದಲ್ಲಿ ಈ ಪಟ್ಟಣ ಬೆಳೆಯಿತು.  ಹಿಂದೆ ಇಲ್ಲಿಯ ಚಿನ್ನದಗಣಿಗಳ ಆಡಳಿತವನ್ನು ನಡೆಸುತ್ತಿದ್ದ ಜಾನ್ ಟೇಲರ್ ಅಂಡ್ ಕಂಪೆನಿಯ ತಾಂತ್ರಿಕ ಅಧಿಕಾರಿ ಯೋಗಕ್ಷೇಮದ ಬಗ್ಗೆ ಹೆಚ್ಚು ಆಸಕ್ತಿವಹಿಸಿ ಸೇವೆ ಸಲ್ಲಿಸಿದ್ದರಿಂದ ಅವರಿಬ್ಬರ ಸ್ಮರಣಾರ್ಥ ಗಣಿ ಪ್ರದೇಶದ ಎರಡು ಬಡಾವಣೆಗಳಿಗೆ ಅವರ ಹೆಸರನ್ನು ಇಡಲಾಯಿತು.  ಆ ಒಂದು ಬಡಾವಣೆಯೇ ಬೆಳೆದು ರಾಬರ್ಟ್‍ಸನ್‍ಪೇಟೆ ಆಯಿತು.

ರಾಬರ್ಟ್‍ಸನ್‍ಪೇಟೆ ಮತ್ತು ಉರಿಗಾಂ ಎರಡಕ್ಕೂ ರೈಲ್ವೆ ನಿಲ್ದಾಣವಿದೆ.  ರಾಬರ್ಟ್‍ಸನ್‍ಪೇಟೆಯಲ್ಲಿ ಪುರಸಭೆಯ ಮಾರುಕಟ್ಟೆ ಇದೆ; ಬಾಲಕ ಹಾಗೂ ಬಾಲಕಿಯರಿಗೆ ಪ್ರೌಢಶಾಲೆಗಳು, ಪ್ರಥಮದರ್ಜೆ ಕಲೆ, ವಿe್ಞÁನ ಹಾಗೂ ವಾಣಿಜ್ಯ ಕಾಲೇಜೂ ಇವೆ.  ಈ ಪಟ್ಟಣದ ಈಶಾನ್ಯಕ್ಕೆ 11 ಕಿಮೀ ದೂರದಲ್ಲಿರುವ ಬೇತಮಂಗಲ ಕೆರೆಯಿಂದ ಇಲ್ಲಿಗೆ ರಕ್ಷಿತ ಕುಡಿಯುವ ನೀರಿನ ಸರಬರಾಜಿದೆ.  ಅಂಚೆ, ತಂತಿ, ದೂರವಾಣಿ ಮತ್ತು ವಿದ್ಯುತ್ ಸೌಲಭ್ಯದ ಜೊತೆಗೆ ಇಲ್ಲಿ ಹೆರಿಗೆ ಮತ್ತು ಸಾರ್ವಜನಿಕ ಆಸ್ಪತ್ರೆ ಇವೆ.

ರಾಬರ್ಟ್‍ಸನ್‍ಪೇಟೆಯ ಪುರಸಭೆಗೆ ಸೇರಿರುವ ಉರಿಗಾಂ 1880 ರಲ್ಲಿ ಒಚಿದು ಸಣ್ಣ ಗ್ರಾಮವಾಗಿತ್ತು.  ಈ ಗ್ರಾಮದಲ್ಲಿರುವ ಹೊಯ್ಸಳ ರಾಮನಾಥನ ಕಾಲದ (13ನೆಯ ಶತಮಾನ) ಶಾಸನಗಳಿಂದ ಈ ಸ್ಥಳಕ್ಕೆ ಉರಿಗೈಯಂ ಎಂಬ ಹೆಸರಿದ್ದುದಾಗಿ ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ